ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನದ ಇತಿಹಾಸ

 

ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನವನ್ನು ಬಸಪ್ಪ ಶೆಟ್ಟಿ ಅವರು ಕೇವಲ ತಮ್ಮ ಕುಟುಂಬದ ಮೂಲಗಳಿದ ಸ್ಥಾಪಿಸಿದರು.

ಬೆಂಗಳೂರಿನ ಶ್ರೀ ಬನಶಂಕರಿ ದೇವಿಯ ಮೂಲ ಸ್ಥಳ ಬಾದಾಮಿ, ಚಾಲುಕ್ಯರ ಹಿಂದಿನ ರಾಜಧಾನಿಯಾಗಿದೆ. ಕರ್ನಾಟಕದ ರಾಜ್ಯಲಕ್ಷ್ಮಿ, ಶ್ರೀ ಬನಶಂಕರಿ ದೇವಿ ಬಾದಾಮಿಯಿಂದ ಬೆಂಗಳೂರಿಗೆ ಬಂದು ಸ್ಥಾಪಿತವಾದ ದೇವತೆ.

ಕರ್ನಾಟಕದ ಬಿಜಾಪುರ ಜಿಲ್ಲೆಯ ಒಂದು ಭಾಗವಾದ ಬಾದಾಮಿ ಶತಮಾನಗಳ ಹಿಂದೆ ಚಾಲುಕ್ಯ ರಾಜವಂಶದ ರಾಜಧಾನಿಯಾಗಿತ್ತು. ಕ್ರಿ.ಶ. 500 ಮತ್ತು ಕ್ರಿ.ಶ. 760ರ ನಡುವೆ ಆಳಿದ ಚಾಲುಕ್ಯರು ಇಡೀ ಕರ್ನಾಟಕ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಆಳಿದರು ಹಾಗೂ ಸಮರ್ಥ ಮತ್ತು ಶೂರ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದರು. ಇಂದಿನ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರ ಮತ್ತು ಒರಿಸ್ಸಾ ಮತ್ತು ತಮಿಳುನಾಡಿನ ಹೆಚ್ಚಿನ ಭಾಗಗಳನ್ನು ಇವರ ಆಡಳಿತ  ಒಳಗೊಂಡಿತ್ತು. ಇಮ್ಮಡಿ ಪುಲಿಕೇಶಿಯ ಸಾಮ್ರಾಜ್ಯ ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೂ ವಿಸ್ತರಿಸಿತ್ತು.

ಶ್ರೀ ಬನಶಂಕರಿ ದೇವಿ ಪುಲಿಕೇಶಿಯ ಕುಟುಂಬದ ದೇವತೆ. ಪುರಾಣಗಳಲ್ಲಿ ಬನಶಂಕರಿ ದೇವಿಯನ್ನು ಅಗಸ್ತ್ಯನಂತಹ ಮಹಾನ್ ಋಷಿಗಳು ಪೂಜಿಸುತ್ತಿದ್ದರು. ಬಾದಾಮಿಯಿಂದ ಬೆಂಗಳೂರಿಗೆ ಶ್ರೀ ಬನಶಂಕರಿ ದೇವಿಯ ಪ್ರಯಾಣವು ಒಂದು ವಿಶೇಷ  ಭಕ್ತರ ಪೂಜೆ ಮತ್ತು ಪ್ರಾರ್ಥನೆಯನ್ನು ಹೊಂದಿದೆ.

 

ಅನೇಕ ವರ್ಷಗಳ ಹಿಂದೆ ಬೆಂಗಳೂರಿನ ಕಬ್ಬನ್ಪೇಟೆಯಲ್ಲಿ ಬಸಪ್ಪ ಶೆಟ್ಟಿ ಎಂಬ ಶ್ರೀಮಂತ ಮತ್ತು ಪ್ರಸಿದ್ಧ ವ್ಯಾಪಾರಿ ಇದ್ದರು. ಅವರು ಸರೆಬಂಡೆಪಾಳ್ಯದ ಒಂದು ಬ್ರಾಹ್ಮಣ ಕುಟುಂಬದೊಂದಿಗೆ ಉತ್ತಮ ಸ್ನೇಹಿತರಾಗಿದ್ದರು. ಅವರ ಎರಡೂ  ಕುಟುಂಬಗಳು ಬಾದಾಮಿ ಶ್ರೀ ಬನಶಂಕರಿ ದೇವಿಯ ಮಹಾನ್ ಆರಾಧಕರಾಗಿದ್ದರು. ಪ್ರತಿ ವರ್ಷವೂ ವಿಫಲವಾಗದೇ, ದೇವತೆಗೆ ಪ್ರಾರ್ಥನೆಗಳನ್ನು ಸಲ್ಲಿಸಲು ಅವರು ಬಾದಾಮಿಗೆ ಭೇಟಿ ನೀಡುತ್ತಿದ್ದರು. ಕ್ರಮೇಣ ಬಸಪ್ಪ ಶೆಟ್ಟಿ ಮತ್ತು ಅವರ ಸ್ನೇಹಿತ ಇಬ್ಬರೂ ಮುದುಕರಾದರು. ಆ ದಿನಗಳಲ್ಲಿ ಬಾದಾಮಿಗೆ ಪ್ರಯಾಣ ಬೆಳೆಸುವುದು ಕಷ್ಟಕರವಾಗಿತ್ತು. ಬಾದಾಮಿಗೆ ತಮ್ಮ ವಾರ್ಷಿಕ ಪ್ರವಾಸವನ್ನು ಬಿಟ್ಟುಬಿಡಲು ಎರಡೂ ಸ್ನೇಹಿತರು ಒಮ್ಮೆ ನಿರ್ಧರಿಸುತ್ತಾರೆ. ಆದರೆ  ಬ್ರಾಹ್ಮಣನ ಪತ್ನಿ ಇದನ್ನು ಬೆಂಬಲಿಸುವುದಿಲ್ಲ ಮತ್ತು ಬಾದಾಮಿ ವಾರ್ಷಿಕ ಭೇಟಿ ನಡೆಯಲೇಬೇಕು ಎಂದು ಒತ್ತಾಯಿಸುತ್ತಾರೆ. ಬಸಪ್ಪ ಶೆಟ್ಟಿ ಮತ್ತು ಬ್ರಾಹ್ಮಣರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುತ್ತಾರೆ ಮತ್ತು ಬಾದಾಮಿಗೆ ತೆರಳುತ್ತಾರೆ.

ಅದೇ ಸಮಯದಲ್ಲಿ, ದೇವತೆ ಶ್ರೀ ಬನಶಂಕರಿ ದೇವಿ, ಬಾದಾಮಿ ದೇವಸ್ಥಾನದ ಅರ್ಚಕರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ  ಮತ್ತು “ಬೆಂಗಳೂರಿನಿಂದ ಬರುವ ಬಸಪ್ಪ ಮತ್ತು ಬ್ರಾಹ್ಮಣನ ಕುಟುಂಬ ನನ್ನ ಭಕ್ತರು. ಅವರು ಬೆಂಗಳೂರಿಗೆ ಹಿಂದಿರುಗಿದಾಗ ನನ್ನ ಪಂಚಲೋಹ (ಐದು ಲೋಹಗಳಿಂದ ಮಾಡಿದ) ವಿಗ್ರಹವನ್ನು ನೀಡಿ" ಎಂದು ಹೇಳುತ್ತಾರೆ.

ಬಸಪ್ಪ ಮತ್ತು ಬ್ರಾಹ್ಮಣ ಕುಟುಂಬಗಳು ಬಾದಾಮಿಯಲ್ಲಿ ಯಾವುದೇ ಅನಾನುಕೂಲತೆ ಇಲ್ಲದೆ ತಮ್ಮ ಪ್ರಾರ್ಥನೆಯನ್ನು ಪೂರ್ಣಗೊಳಿಸುತ್ತಾರೆ. ಬಸಪ್ಪ ಮತ್ತು ಬ್ರಾಹ್ಮಣರ ಕನಸಿನಲ್ಲಿಯೂ ದೇವಿಯು ಕಾಣಿಸಿಕೊಳ್ಳುತ್ತಾರೆ  ಮತ್ತು "ನಾನು ಬೆಂಗಳೂರಿಗೆ ಬರುತ್ತೇನೆ ಹಾಗೂ ಅಲ್ಲಿ ಬೆಂಗಳೂರಿನಲ್ಲಿ ಭಕ್ತರನ್ನು ಆಶೀರ್ವದಿಸಲು ಅಲ್ಲಿಯೇ ನೆಲೆಸುತ್ತೇನೆ ಮತ್ತು ಅಲ್ಲಿ ನಿಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸುತ್ತೇನೆ. ತಕ್ಕ ಸಮಯದಲ್ಲಿ, ನಗರವನ್ನು ರಾಜಧಾನಿಯನ್ನಾಗಿ ಸ್ಥಾಪಿಸಿ ನಾನು ಬೆಂಗಳೂರಿನಲ್ಲಿ ನೆಲೆಸುತ್ತೇನೆ" ಎಂದು ಹೇಳುತ್ತಾರೆ.

 

ದೇವಿಯ ಸೂಚನೆಗಳ ಪ್ರಕಾರ, ಅರ್ಚಕ ಪಂಚಲೋಹ ವಿಗ್ರಹವನ್ನು ಬಸಪ್ಪ ಮತ್ತು ಬ್ರಾಹ್ಮಣರಿಗೆ ಅವರು ಬೆಂಗಳೂರಿಗೆ ಹಿಂದಿರುಗಿದಾಗ ನೀಡುತ್ತಾರೆ.

ಬೆಂಗಳೂರಿಗೆ ಹಿಂದಿರುಗಿದ ನಂತರ ಬಸಪ್ಪ ಶೆಟ್ಟಿ ಅವರು ಶ್ರೀ ಬನಶಂಕರಿ ದೇವಿಗಾಗಿ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸುತ್ತಾರೆ. ಸ್ಥಳೀಯ ಭಕ್ತರು ಬಸಪ್ಪರವರಿಗೆ ಈ ದೈವಿಕ ಉದ್ದೇಶಕ್ಕಾಗಿ ಸಹಾಯ ಮಾಡುತ್ತಾರೆ. ದೇವನಹಳ್ಳಿಯಿಂದ ಬಂದ ಶಿಲ್ಪಿಗಳು ಶ್ರೀ ಬನಶಂಕರಿ ದೇವಿಯ ಸುಂದರ ವಿಗ್ರಹವನ್ನು ಕೆತ್ತಿದರು. ಇಂದಿನ ಕನಕಪುರ ರಸ್ತೆಯ ಒಂದು ವಿಶಾಲ ಭೂಭಾಗದಲ್ಲಿ, ಶ್ರೀ ಬನಶಂಕರಿ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ಶ್ರೀ ಚಕ್ರವನ್ನು ದೇವಿಯ ವಿಗ್ರಹದ ಮುಂದೆ ಇಡಲಾಗಿದೆ. ಈ ಚಕ್ರದಲ್ಲಿ ಬಾದಾಮಿಯಿಂದ ತಂದ ಪಂಚಲೋಹ ವಿಗ್ರಹವನ್ನು ಇರಿಸಲಾಗುತ್ತದೆ ಮತ್ತು ವಿಗ್ರಹಕ್ಕೆ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.

 

ಬಾದಾಮಿಯಿಂದ ಬೆಂಗಳೂರಿಗೆ ಬಂದ ನಂತರ, ಶ್ರೀ ಬನಶಂಕರಿ ದೇವಿಯು ಭಕ್ತರನ್ನು ಆಶೀರ್ವದಿಸಿ ರಕ್ಷಿಸುತ್ತಿದ್ದಾರೆ ಹಾಗೂ ಇಡೀ ಬೆಂಗಳೂರಿಗೆ ತಾಯಿಯಾಗಿದ್ದಾರೆ. ಇಲ್ಲಿನ ಪೂಜೆಯನ್ನು "ರಾಹುಕಾಲ"ದಲ್ಲಿ ನಡೆಸಲಾಗುತ್ತದೆ ಎಂಬುದು ಈ ದೇವಸ್ಥಾನದ ವಿಶಿಷ್ಟತೆ. ರಾಹುಕಾಲವನ್ನು ಪ್ರತಿಕೂಲವಾದ ಸಮಯವೆಂದು  ಪರಿಗಣಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಯಾವುದೇ ಉತ್ತಮ ಕಾರ್ಯಗಳನ್ನು ಪ್ರಾರಂಭಿಸಲಾಗುವುದಿಲ್ಲ ಹಾಗೂ ಆ ಸಮಯದಲ್ಲಿ ಪೂಜೆಯನ್ನು ಯಾವುದೇ ದೇವಸ್ಥಾನದಲ್ಲಿ ನಡೆಸಲಾಗುವುದಿಲ್ಲ. ಹಾಗಿದ್ದರೂ, ದೇವತೆ ಶ್ರೀ ಬನಶಂಕರಿ ದೇವಿಯ ಸ್ಫೂರ್ತಿಯ ಮೇಲೆ, ಇಂದಿನ ಪ್ರಧಾನ ಅರ್ಚಕರಾದ ಶ್ರೀ ಚಂದ್ರಮೋಹನ್ ಅವರ ತಾತ ಶ್ರೀ ಸೂರ್ಯನಾರಾಯಣ ಶಾಸ್ತ್ರಿಯವರು ಸುಮಾರು 60 ವರ್ಷಗಳ ಹಿಂದೆ ರಾಹುಕಾಲದಲ್ಲಿ ಈ ಪೂಜೆಯ ಆಚರಣೆಗಳನ್ನು ಪ್ರಾರಂಭಿಸಿದರು. ಇದು ವಿಶೇಷ ಮತ್ತು ಸರಳವಾದ ಆಚರಣೆಯಾಗಿದೆ, ಎಲ್ಲರೂ  ಮಾಡಬಹುದು. ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿರುವ ಭಕ್ತರು ಈ ಪೂಜೆಯನ್ನು ಮಾಡುತ್ತಾರೆ ಮತ್ತು ಎಲ್ಲಾ ತೊಂದರೆಗಳಿಂದ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ದೇವಿಯಿಂದ ಸ್ಫೂರ್ತಿ ಪಡೆದ ರಾಹುಕಾಲ ಪೂಜೆ ಶ್ರೀ ಬನಶಂಕರಿ ದೇವಿಗೆ ಶರಣಾಗಲು ಮತ್ತು ಆಕೆಯ ಆಶೀರ್ವಾದವನ್ನು ಪಡೆಯಲು ಅನೇಕ ಭಕ್ತರಿಗೆ ಒಂದು ಸಾಧನವಾಗಿ ಮಾರ್ಪಟ್ಟಿದೆ.

 

ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ನಡೆಯುವ ಈ ವಿಶೇಷ ರಾಹುಕಾಲ ಪೂಜೆ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಭಕ್ತರು ಪ್ರಾರ್ಥನೆ ಮಾಡಿ ದೇವತೆಯ ರಕ್ಷಣೆ ಮತ್ತು ಆಶೀರ್ವಾದವನ್ನು ಪಡೆಯುತ್ತಾರೆ. ಬೆಂಗಳೂರು ಶ್ರೀ  ಬನಶಂಕರಿ ದೇವಿಯ ಕಾವಲು ರಕ್ಷಣೆಯಡಿಯಲ್ಲಿ ಪ್ರಗತಿ, ವೈಭವ ಮತ್ತು ಕರ್ನಾಟಕದ ರಾಜಧಾನಿಯಾಗಿ ಮುಂದುವರಿಯುತ್ತಿದೆ.

 

ಶ್ರೀ ಬನಶಂಕರಿ ದೇವಸ್ಥಾನದ ವಿಶಿಷ್ಟತೆ

ಬೆಂಗಳೂರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ರಾಹುಕಾಲದಲ್ಲಿ ವಿಶೇಷವಾಗಿ ಪೂಜೆ ನಡೆಸಲಾಗುತ್ತದೆ ಮತ್ತು ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ರಾಹುಕಾಲ ಪ್ರತಿಕೂಲವಾದ ಸಮಯ ಎಂದು ನಂಬಲಾಗಿದೆ. ಇದರಲ್ಲಿ ಭಕ್ತಾದಿಗಳು ಶ್ರೀ ಬನಶಂಕರಿ ದೇವರನ್ನು ಪೂಜಿಸುವರೆಂದರೆ ರಾಹುಕಲಾದಲ್ಲಿ ಎಲ್ಲ ಸಂಕಷ್ಟಗಳನ್ನೂ ಜೀವನ ಕೊರತೆಗಳನ್ನೂ ಜಯಿಸಲು ಸಾಧ್ಯ ಎಂದು ನಂಬಲಾಗಿದೆ. ಈ ದೇವಾಲಯವು ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ಭಾರೀ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಶ್ರೀ ಬನಶಂಕರಿ ದೇವಿಗೆ ರಾಹುಕಾಲದಲ್ಲಿ ಮಹಿಳಾ ಭಕ್ತಾದಿಗಳು ವಿಶೇಷವಾಗಿ ನಿಂಬೆಹಣ್ಣಿನ ಆರತಿಯನ್ನು ಬೆಳಗುತ್ತಾರೆ.

 

ಈ ಸಂಪ್ರದಾಯದ ಹಿಂದಿರುವ ಒಂದು ಜನಪದವೆಂದರೆ, ಒಮ್ಮೆ ಮೂರು ಮುತ್ತೈದೆಯರು ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ರಾಹುಕಾಲದಲ್ಲಿ ಪೂಜೆ ಮಾಡಲು ದೇವಸ್ಥಾನದ ಅರ್ಚಕರಿಗೆ ಕೇಳಿದರು. ಅರ್ಚಕರು ಮೊದಲಿಗೆ ಮಾಡಲು ನಿರಾಕರಿಸಿದರೂ, ಮುತ್ತೈದೆಯರು ಈ ಸಮಯದಲ್ಲಿ ದೇವಿಗೆ ಪೂಜೆ ಮಾಡಿ ಎಂದು ಕೇಳಿಕೊಂಡರು. ಪೂಜೆ ಪೂರ್ಣಗೊಂಡ ನಂತರ  ಅರ್ಚಕರು ಪ್ರಸಾದವನ್ನು ನೀಡಲು ಹೊರಬರುತ್ತಾರೆ. ಆದರೆ ಮುತ್ತೈದೆಯರು ಕಣ್ಮರೆಯಾಗಿದ್ದಾರೆಂದು ಕಂಡುಕೊಳ್ಳುತ್ತಾರೆ. ಆಗಿನ ಅರ್ಚಕರಾದ ಶ್ರೀ ಸೂರ್ಯನಾರಾಯಣ ಶಾಸ್ತ್ರಿಗಳು ರಾಹುಕಾಲದಲ್ಲಿ ದೇವಿಗೆ ಪೂಜೆಯನ್ನು ಪ್ರಾರಂಭಿಸಿದ್ದಾರೆ. ರಾಹುಕಾಲದಲ್ಲಿ ದೇವಿಗೆ ತಮ್ಮ ತಮ್ಮ ಸಂಕಷ್ಟಗಳನ್ನು ಪ್ರಾರ್ಥಿಸಿದರೆ ಒಳ್ಳೆಯದಾಗುತ್ತದೆ ಎಂದು ಭಕ್ತಾದಿಗಳ ನಂಬಿಕೆ. ಅದೇ ರೀತಿ ಭಕ್ತಾದಿಗಳಿಗೆ ಅನುಕೂಲವೂ ಆಗುತ್ತಿದೆ. ಈ ರಾಹುಕಾಲ ಪೂಜೆಯನ್ನು ಅಂದಿನ ಪ್ರಧಾನ ಅರ್ಚಕರಾದ ಶ್ರೀ ಸೂರ್ಯನಾರಾಯಣ ಸ್ವಾಮಿಗಳ ವಂಶಸ್ಥರೇ ನಡೆಸಿಕೊಂಡು ಬಂದಿದ್ದಾರೆ.

 

ದೇವಸ್ಥಾನದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವ ಮಾರ್ಗವೂ ಬಹಳ ಆಸಕ್ತಿದಾಯಕವಾಗಿದೆ. ಭಕ್ತರು ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಒಳಗೆ ತಿರುಳು ತೆಗೆಯುವ ಮೂಲಕ ದೀಪವನ್ನು ಮಾಡಿ ಅದರಲ್ಲಿ ತೈಲವನ್ನು ಹಾಕಿ  ಶ್ರೀ ಶಾಕಾಂಬರಿ ಮತ್ತು ಶ್ರೀ  ಬನಶಂಕರಿ ದೇವಿಗೆ ದೀಪ ಬೆಳಗುತ್ತಾರೆ.

ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳು  ಶುಭದಾಯಕವೆಂದು ಪರಿಗಣಿಸಲಾಗಿದೆ ಮತ್ತು ಈ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. 

ಪ್ರತಿವರ್ಷ ದೇವಾಲಯದಲ್ಲಿ ನಾಲ್ಕು ಉತ್ಸವಗಳನ್ನು ಆಚರಿಸಲಾಗುತ್ತದೆ. ಪುಷ್ಯ ಶುದ್ಧ ಹುಣ್ಣಿಮೆ ದಿನದಂದು ಶ್ರೀ ಬನಶಂಕರಿ ಜಾತ್ರೆ,  ದೇವಾಲಯದ ವಾರ್ಷಿಕೋತ್ಸವ, ದಸರಾ ಉತ್ಸವ  ಮತ್ತು  ಭಾದ್ರಪದ ಶುದ್ಧ ಹುಣ್ಣಿಮೆ ದಿನದಂದು ಶ್ರೀ ಬನಶಂಕರಿ ಜನ್ಮೋತ್ಸವ .

ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಒಳಪಟ್ಟಿದೆ.

 

ಶ್ರೀ ಬನಶಂಕರಿ ಸನ್ನಿಧಿಯಲ್ಲಿ ಇರುವ ದೇವತೆಗಳು:

  • ಶ್ರೀ ಶಾಕಾಂಬರಿ ದೇವಿ
  • ಶ್ರೀ ಚೌಡೇಶ್ವರಿ ದೇವಿ
  • ಶ್ರೀ ಮಹಾ ಗಣಪತಿ
  • ಶ್ರೀ ಪರ್ವತ ಮಲ್ಲಿಕಾರ್ಜುನ ಸ್ವಾಮಿ
  • ಶ್ರೀ ಆಂಜನೇಯ ಸ್ವಾಮಿ
  • ನವಗ್ರಹಗಳು
bsk (8)
bsk (34)
bsk (24)
bsk (17)
bsk (18)
bsk (1)

561total visits,4visits today